Saturday, 28 February 2009

ಮಾಮೂಲಿ ಗಾಂಧಿ

ಆತ್ಮೀಯ ಸ್ನೇಹಿತ ಕಲಿಗಣನಾಥ ಗುಡುದೂರ ರ ಕಥಾಸಂಕಲನ ಬಿಡುಗಡೆ ನಾಳೆ,ಅವರು ಯಾವಾಗಲು ಹೀಗೆ ಬರೆಯುತ್ತಿರಲೆಂದು ಹಾರೈಕೆ.




ನನ್ನೊಳಗಿನ ಹಿರಿಯ ಜೀವವೆಂಬ ಮೋಹನ್ ಸರ್,
ನಮಸ್ಕಾರಗಳು. ನಿಮ್ಮ ಪ್ರೀತಿಯಿಂದ ನಾನು ಕನ್ನಡ ಕಥಾಲೋಕಕ್ಕೆ ಪರಿಚಯವಾಗಿದ್ದನ್ನು ಎಂದೆಂದೂ ಮರೆಯಲಾರದ್ದು. ನಿಮ್ಮ ಸಲಹೆ, ಪ್ರೀತಿಯನ್ನುಂಡು ಬರೆಯುತ್ತಿರುವೆ. ಮಾ.೧ರಂದು ನನ್ನ ಮೂರನೇ ಕಥಾ ಸಂಕಲನ ಬಿಡುಗಡೆಯಾಗಲಿದೆ. ನಿಮ್ಮೊಂದಿಗೆ ಈ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ನಿಮ್ಮವ
ಕಲಿಗಣನಾಥ ಗುಡದೂರು

’ಮಾಮೂಲಿ ಗಾಂಧಿ’ ಮಾ.೧ರಂದು ಬಿಡುಗಡೆಯಾಗುತ್ತಿದೆ...
ನಿಮ್ಮೊಂದಿಗೆ ಕೆಲ ನಿಮಿಷ ನನ್ನ ಅಂತರಾಳದ ಮಾತುಗಳನ್ನು ಹಂಚಿಕೊಳ್ಳುವ ದಿನ ಬಂದಿದೆ. ’ನೀನು ಕಥೆಗಳನ್ನು ಬರೆಯುತ್ತಾ ಇರಬೇಕು...’ ಎಂಬ ಗೆಳೆಯರ ಮತ್ತು ಹಿರಿಯ ಹಿತೈಷಿಗಳೆಲ್ಲರ ಬೆನ್ನು ತಟ್ಟಿದ್ದಕ್ಕೆ ಕೇವಲ ಪುಳುಕಿತನಾಗದೆ, ನಿಮ್ಮ ಕೈಗಳಿಗೆ ಮಾ.೧,೨೦೦೯ರಂದು ’ಮಾಮೂಲಿ ಗಾಂಧಿ’ ರೂಪದಲ್ಲಿ ಮೂರನೇ ಕಥಾ ಸಂಕಲನ ನೀಡುತ್ತಿದ್ದೇನೆ. ಕಳೆದ ವರ್ಷ ಅನುಭವಿಸಿದ ತಲ್ಲಣಗಳ ಮರೆಯಲು ’ಮಾಮೂಲಿ ಗಾಂಧಿ’ ಕಥೆಗಳನ್ನು ರಚಿಸಿದ್ದೇನೆ. ಇಲ್ಲಿ ಬರೆದ ಬಹುತೇಕ ಕಥೆಗಳು ಹೊಚ್ಚ ಹೊಸವು. ಮೊದಲನೇ ಕಥಾ ಸಂಕಲನ ’ಉಡಿಯಲ್ಲಿಯ ಉರಿ’ ಇನ್ನೂ ಈಗಲೂ ತನ್ನ ಕಿಚ್ಚನ್ನು ಹೊತ್ತಿಸುತ್ತಿದೆ ಎಂಬುದಕ್ಕೆ ಫೆ.೨೬ರಂದು ’ಸಂಯುಕ್ತ ಕರ್ನಾಟಕ’ ಪತ್ರಿಕೆಯ ಕಥಾಲೋಕ ಅಂಕಣದಲ್ಲಿ ಹಿರಿಯ ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ಉಡಿಯಲ್ಲಿಯ ಉರಿ ಬಗ್ಗೆ ಮತ್ತೊಮ್ಮೆ ಆಪ್ತವಾಗಿ ಬರೆದು, ನನ್ನಂತ ಕಥೆಗಾರರ ಕಥೆಗಳನ್ನು ಓದುವ, ವಿಮರ್ಶಿಸುವ ಹೃದಯವಂತಿಕೆ ಹಿರಿಯರಲ್ಲಿ ಬೆಳೆಯಬೇಕು ಎಂಬುದನ್ನು ಹೇಳಿದ್ದಾರೆ. ಎರಡನೇ ಕಥಾ ಸಂಕಲನ ’ಮತಾಂತರ’ದ ಪ್ರತಿಗಳಿಗಾಗಿ ಈಗಲೂ ಅನೇಕರು ಕೇಳುತ್ತಿರುತ್ತಾರೆ. ಆದರೆ ಪ್ರತಿಗಳೆಲ್ಲಾ ಮುಗಿದಿವೆ. ಎರಡು ಕಥಾ ಸಂಕಲನಗಳಲ್ಲಿದ್ದ ಕಥೆಗಳಿಗಿಂತ ಒಂದಷ್ಟು ಮಟ್ಟಿಗೆ ಕಥಾ ಹಂದರದಲ್ಲಿ ಹೊಸತನ ಸಾಧಿಸುವ ಪ್ರಯತ್ನ ’ಮಾಮೂಲಿ ಗಾಂಧಿ’ ಕಥಾಸಂಕಲನದಲ್ಲಿ ಮೂರ್ತ ರೂಪ ತಾಳಿದೆ. ಫೆಬ್ರುವರಿ-೦೯ರ ಮಯೂರದಲ್ಲಿ ’ಕನ್ನಡಿಯೊಳಗಿನ ಚಿತ್ರಗಳು’ ಕಥೆ ಪ್ರಕಟವಾದಾಗ, ಈ ಹಿಂದೆ ಬರೆದ ಎಲ್ಲ ಕಥೆಗಳಿಗಿಂತ ತೀರಾ ಭಿನ್ನವಾಗಿ ಬರೆದಿದ್ದಿ. ಈ ರೀತಿಯ ಹೊಸತನ ಕನ್ನಡ ಕಥಾ ಲೋಕಕ್ಕೆ ಅವಶ್ಯ ಎಂಬುದನ್ನು ಅನೇಕ ಗೆಳೆಯರು ನನ್ನೊಂದಿಗೆ ಹಂಚಿಕೊಂಡಿದ್ದರು. ಆ ಕಥೆ ಇನ್ನೇನು ತಿಂಗಳ ಕಥೆಯಾಗಿ ಆಯ್ಕೆಯಾಗುತ್ತೆ ಎಂದೇ ಹಲವು ಗೆಳೆಯರು ಕನಸು ಕಟ್ಟಿದ್ದರು. ರನ್ನರ್ ಅಪ್‌ಗೆ ಸಂತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಆ ಕಥೆಯ ಬಗ್ಗೆ ಹಿರಿಯ ವಿಮರ್ಷಕರಾದ ಎಚ್.ಎಸ್.ರಾಘವೇಂದ್ರರಾವ್ ಬರೆದದ್ದು ಹೀಗೆ... "ಅತಿ ನಿಕಟವಾದ ವರ್ತಮಾನವನ್ನು ತೆಗೆದುಕೊಂಡು ಕಥೆ ಬರೆಯುವುದು ದೊಡ್ಡ ಸವಾಲು. ’ಕನ್ನಡಿಯೊಳಗಿನ ಚಿತ್ರಗಳು’ ಕಥೆಯು ಇಂತಹ ಸವಾಲನ್ನು ಸ್ವೀಕರಿಸುತ್ತದೆ. ಇದರಲ್ಲಿ, ಕಲಾವಿದನೂ ಆದ ನಕ್ಸಲೀಯನು ತನ್ನ ಕಲೆ ಮತ್ತು ಮಾನವೀಯತೆಗಳ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಾನೆ. ಆದರೆ, ಅವನ ವರ್ತನೆಯ ಹಿಂದೆ ಯಾವುದೇ ಅಜೆಂಡಾ ಕಾಣಿಸುವುದಿಲ್ಲ. ಬದಲಾಗಿ ಅಲ್ಲಿ ಹುಂಬವೆನ್ನಿಸುವ ಒಳ್ಳೆಯತನವಿದೆ. ವ್ಯವಸ್ಥೆಯ ಕ್ರೌರ್ಯವು ಎಲ್ಲರಿಗೂ ತಿಳಿದಿರುವುದೇ. ಆದರೆ ಈ ಕಥೆಯಲ್ಲಿ ಭೀಭತ್ಸ, ಮಾನವತೆ ಮತ್ತು ಕ್ರೌರ್ಯಗಳ ಓವರ್‌ಡೋಸ್ ಇರುವುದರಿಂದ ಕಥೆಯ ವಾಚನೀಯತೆಯು ಕಡಿಮೆಯಾಗುತ್ತದೆ. ಆದರೂ ಇದು ಹಲವು ಸಾಧ್ಯಗಳನ್ನು ಪಡೆದಿರುವ ಕಥೆ.’
ಇನ್ನೂ ಉಳಿದ ಎಲ್ಲ ಕಥೆಗಳ ಬಗ್ಗೆ ಹೀಗೆ ಹೇಳಲಾಗಿದ್ದರೂ ನನ್ನನ್ನು ಬಹುವಾಗಿ ಕಾಡಿ ಬರೆಸಿದ ಕಥೆಯೆಂದರೆ ’ಎರಡು ಪಾರಿವಾಳಗಳು’. ಅಬ್ಬಾ ಕಥೆಯನ್ನು ನಾನೇ ಬರೆದನೊ? ಇಲ್ಲಾ ಆ ಎರಡು ಪಾರಿವಾಳಗಳೇ ಬರೆಯಿಸಿದವೊ? ಗೊತ್ತಿಲ್ಲ. ಯುದ್ಧೋತ್ಸಾಹಿ ಮನಸ್ಸುಗಳ ಮುಂದೆ ಹಲವು ಪ್ರಶ್ನೆಗಳ ಜೊತೆಗೆ ಕಣ್ಣ ಮುಂದೆಯೇ ಮನುಷ್ಯ ಸಹಜ ಪ್ರೀತಿಯ ದಾರಿಯನ್ನು ಹುಡುಕಿವೆ ಈ ಎರಡು ಪಾರಿವಾಳಗಳು. ಹಾಗೆಯೇ ’ದೊಡ್ಡವರ ನಾಯಿ’, ’ಒಂದು ಸಹಜ ಸಾವು’ ಇವತ್ತಿನ ರಾಜಕೀಯ, ಸಾಮಾಜಿಕ ಕಲುಷಿತ ಮನಸುಗಳ ಬಗ್ಗೆ ವಿಷಾದ ಮೂಡಿಸುವ ಜೊತೆಗೆ ನಾವೆತ್ತ ಸಾಗಬೇಕು ಎಂಬ ಸೂಕ್ಷ್ಮಗ್ರಹಿಕೆಯನ್ನು ಕಥಾ ಹಿನ್ನೆಲೆಯಲ್ಲಿ ಅಂಗೈ ಗೆರೆಗಳಂತೆ ತೋರಿಸುತ್ತದೆ. ಕೊನೆಯ ಚಿಕ್ಕ ಕಥೆ ಕಥೆಗಾರನೊಂದಿಗೆ ಸುತ್ತ ಮುಸುಕಿರುವ ಕತ್ತಲೆ ನಡೆಸಿರುವ ಸಂವಾದವಿದೆ. ನನ್ನಂತವನಲ್ಲಿರಬಹುದಾದ ಹಮ್ಮು ಬಿಮ್ಮುಗಳನ್ನು ಮುಕ್ತವಾಗಿ ಕತ್ತಲೆ ಪ್ರಶ್ನಿಸಿದೆ. ಹೀಗೆ ಏನೇ ಹೇಳಿದರೂ ’ಕಥಾ ಸಂಕಲನ’ ಓದುವ, ಮುಕ್ತವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಲ್ಲದೆ ಮತ್ಯಾರಿಗಿದೆ ಹೇಳಿ? ಹಾಗೆ ನಿಮಗೆ ಅನ್ನಿಸಿದ್ದನ್ನು ನನಗೆ ನೇರವಾಗಿ ಹೇಳಿ ಇಲ್ಲಾ, ಮೇಲ್ ಮಾಡಿ. ತಪ್ಪದೇ ಓದಿ, ಮುಂದಿನ ದಿನಗಳಲ್ಲಿ ತಪ್ಪದೇ ಪಾಲಿಸುತ್ತೇನೆ. ಯಾಕೆ ಹೀಗೆಲ್ಲಾ ಹೇಳುತ್ತೇನೆ ಅಂದರೆ... ನಾನು ನಿಮ್ಮೆಲ್ಲರ ಪ್ರೀತಿ ಅಂಗೈಯಲ್ಲಿ ಅರಳಬೇಕಿದೆ. ಘಮಘಮಿಸಬೇಕಿದೆ. ಇದರೊಂದಿಗೆ ಆಮಂತ್ರಣ ಪತ್ರಿಕೆ ಅಂಟಿಸಿರುವೆ. ಸಾಧ್ಯವಿದ್ದರೆ ಬನ್ನಿ. ಬಾರದಿದ್ದರೂ ಬೇಸರವಿಲ್ಲ. ಹೇಗೆ ಸಂಪರ್ಕಿಸಿದರೂ ನಾನಂತೂ ಅತೀವ ಖುಷಿ ಅನುಭವಿಸುತ್ತೇನೆ.
ಗುಲ್ಬರ್ಗದ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ, ನಿ. ತನ್ನ ಉದ್ಘಾಟನಾ ಸಮಾರಂಭ ಮತ್ತು ಪ್ರಕಾಶನದ ಮೊದಲ ಬಾರಿಗೆ ನನ್ನ ’ಮಾಮೂಲಿ ಗಾಂಧಿ’ ಕಥಾ ಸಂಕಲನ ಸೇರಿದಂತೆ ಚಂದ್ರಕಾಂತ ಕುಸನೂರು ಅವರ ’ಸುರೇಖಾ ಮ್ಯಾಡಂ ಎಂಬ ನಾಟಕ, ಡಾ.ಪ್ರಭು ಖಾನಾಪುರೆ ಬರೆದ ’ದೃಷ್ಟಿ’ ಕವನ ಸಂಕಲನ ಮತ್ತು ಸಹ ಕಥೆಗಾರ್ತಿ ಕಾವ್ಯಶ್ರೀ ಮಹಾಗಾಂವಕರ್ ಬರೆದ ’ಬೆಳಕಿನೆಡೆಗೆ’ ಕಥಾ ಸಂಕಲನ ಬಿಡುಗಡೆಗೊಳ್ಳುತ್ತಿವೆ. ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪ ಹತ್ತಿರದ ಶ್ರೀ ರೇಣುಕಾಆರ್ಯ ಕಲ್ಯಾಣ ಮಂಟಪದಲ್ಲಿ ಪುಸ್ತಕಗಳ ಬಿಡುಗಡೆ. ಬೆಳಿಗ್ಗೆ ೧೦ಕ್ಕೆ. ತಪ್ಪದೇ ಬನ್ನಿ. ಅಂದ ಹಾಗೆ ಸಂಸದ ಕೆ.ಬಿ.ಶಾಣಪ್ಪ ಕಾರ್ಯಕ್ರಮ ಉದ್ಘಾಟಿಸಿದರೆ, ಡಾ.ಮಲ್ಲೇಪುರಂ ಜಿ.ವೆಂಕಟೇಶ ಪುಸ್ತಕಗಳನ್ನು ಬಿಡುಗಡೆಮಾಡುವರು. ಗುವಿಗು ಕುಲಪತಿ ಡಾ.ಬಿ.ಜಿ.ಮೂಲಿಮನಿ ಅಧ್ಯಕ್ಷತೆವಹಿಸುವರು. ಡಾ.ಸ್ವಾಮಿರಾವ್ ಕುಲಕರ್ಣಿ ಪುಸ್ತಕಗಳನ್ನು ಪರಿಚಯಿಸುವರು. ಕನ್ನಡನಾಡು ಲೇಖಕರ ಬಳಗದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ ಮತ್ತು ಉಪಾಧ್ಯಕ್ಷ ಡಾ.ಡಿ.ಬಿ.ನಾಯಕ ಅವರು ಸೇರಿದಂತೆ ನೀವೂ ಇರುತ್ತೀರಿ ಎಂದೇ ತಿಳಿದಿದ್ದೇನೆ.

ತಪ್ಪದೇ ಸಂಪರ್ಕಿಸಿ, ಕಥಾ ಸಂಕಲನ ಓದಿ ಬೆನ್ತಟ್ಟಿ...

ನಿಮ್ಮ ಪ್ರೀತಿಯ ಬಯಸುತ್ತಾ...

ಕಲಿಗಣನಾಥ ಗುಡದೂರು

ಸಂಪರ್ಕ
ಕಲಿಗಣನಾಥ ಗುಡದೂರು
ಇಂಗ್ಲಿಷ್ ಉಪನ್ಯಾಸಕ
ಸಂಕೇತ ಪಿ.ಯು.ಕಾಲೇಜ್,
ಸಿಂಧನೂರು-೫೮೪೧೨೮
ಜಿಲ್ಲೆ: ರಾಯಚೂರು
ಮೊ: ೯೯೧೬೦೫೧೩೨೯

1 comment:

  1. ನಿರಂಜನ್ ಸರ್, ನಿಮ್ಮ ಬ್ಲಾಗಿನ ಗೂಡಿಗೆ ಶಿವು ರವರ ಛಾಯಾಕನ್ನಡಿ ದಾರಿ ತೋರಿಸ್ತು. ನಮ್ಮ ಕಡೇಗೂ ಬನ್ನಿ ಸ್ವಲ್ಪ. ನಿಮ್ಮೂರು..ಕೊಟ್ಟೂರೇ?..ನನ್ನ ಮೂವರು ಬಹು ಆತ್ಮೀಯ ಸ್ನೇಹಿತರು ಕೊಟ್ಟೂರಿನವರು. ಎಲ್ಲರೂ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ನನ್ನೊಡನೆ ಅಥವಾ ಒಂದು ವರ್ಷ ಹಿಂದೆ ಮುಂದೆ ಸಹಪಾಠಿಗಲಾಗಿದ್ದವರು. ಡಾ. ಎಸ್.ಎಮ್.ಶಿವಪ್ರಕಾಶ್ ಅದೇ ಮಹಾ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದಾರೆ. ನಿಮ್ಮ ಪೋಸ್ಟ್ ಗಳನ್ನು ಪುರಸೊತ್ತಿನಲ್ಲಿ ನೋಡಿ ಪ್ರತಿಕ್ರಿಯಿಸುವೆ. ಸ್ವಾಗತ ನಿಮಗೆ ನಮ್ಮ ಬಳಗಕ್ಕೆ.

    ReplyDelete