Wednesday 25 February 2009



ನಮ್ಮೆಲ್ಲರ ಪ್ರೀತಿಯ ಗೆಳೆಯ ಸಿದ್ದು ನ ಮೊದಲ ಕವನಸ೦ಕಲನ ಬರುತ್ತಿದೆ.ಅವನಿಗೆ ಎಲ್ಲರ ಪರವಾಗಿ ಅಭಿನ೦ದನೆಗಳು.ಆ ಸಂಕಲನಕ್ಕೆ ಜಿ.ನ್.ಮೋಹನ್ ಸರ್ ಬರೆದ ಬೆನ್ನುಡಿ ಮತ್ತು ಸೃಜನ್ ರ ಕವರ್ ಪೇಜ್ ಇಲ್ಲಿದೆ.



ಕವಿತೆಯೆಂಬ ಬೆಳಕಿನ ಬೀಜ....

ಇವು ಕತ್ತಲ ದಿನಗಳು. ಜನರನ್ನು ಕೊಂದ ಖಡ್ಗಗಳ ಮೇಲೆ ಶಾಂತಿ ಮಂತ್ರಗಳನ್ನು ಕೆತ್ತಿರುವ ದಿನಗಳು. ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿರುವ ದಿನಗಳು. ಮುಖ ಮುಖವೂ ಮುಖವಾಡವ ಹೊತ್ತು ನಿಂತ ಹಾಗಿರುವ ಕಾಲ. ಇಂತಹ ದಿನಗಳಲ್ಲಿ ಕವಿತೆಯೆಂಬ ಬೆಳಕಿನ ಬೀಜವನ್ನು ಹಿಡಿದು ನಿಂತಿರುವ ಹುಡುಗ-ಸಿದ್ಧು ದೇವರಮನಿ.

’ಕತ್ತಲ ಕೂಪದ ಮನೆಗಳೆದಿರು ನಿಂತಿರುವ, ಚಂದಿರನ ಬೆಳಕನ್ನು ಈವರೆಗೂ ಕಂಡಿಲ್ಲದ’ ಸಿದ್ಧು ಬರುವ ನಾಳೆಗಳ ಬಗ್ಗೆ ಚಿಂತಿಸುವ ಕವಿ. ಈತನ ಒಳಗಣ್ಣು ಸಂಚರಿಸುವ ದಾರಿಗಳನ್ನು ಕಂಡು ನಾನು ಬೆರಗಾಗಿದ್ದೇನೆ.

ಷರೀಫಜ್ಜನನ್ನು ಗೋರಿಯಿಂದೆಬ್ಬಿಸಿ ಯುದ್ಧ ಜಾರಿಯಲ್ಲಿರುವ ಊರಿಗೆ ಕರೆದೊಯ್ಯುವ ಛಾತಿ ಈ ಹುಡುಗನಿಗಿದೆ. ಯುದ್ಧವೇ ಕೊನೆಯ ನಿರ್ಧಾರ ಎನ್ನುವವರನ್ನು ಮನುಷ್ಯರನ್ನಾಗಿಸುವ ಕೆಲಸ ನನ್ನದು ಎಂದು ಈತ ಭಾವಿಸಿದ್ದಾನೆ. ಮನೆ ಮನೆಗೂ ಬಣ್ಣ ಬಳಿಯುವ ಪೇಂಟರ್‌ಗೇ, ಬದುಕು ಬಣ್ಣ ಬಳಿಯುತ್ತಾ ಕುಳಿತಿರುವುದು ಈತನಿಗೆ ಮಾತ್ರ ಕಾಣುತ್ತದೆ.

ಸಿದ್ಧು, ಕತ್ತಲ ದಾರಿಗಳಲ್ಲಿ ನಡೆಯುತ್ತಾ ಕಳೆದು ಹೋಗುವವನಲ್ಲ ಈತ ಕತ್ತಲ ಮಧ್ಯೆ ಬೆಳಕಿಗಾಗಿ ಹೊರಟ ಪಯಣಿಗ.
ಕವಿತೆಯೆಂಬ ಬುಡ್ಡಿದೀಪ ತನ್ನ ಸುತ್ತಲಿನ ಕತ್ತಲನ್ನು ಒಂದಿಷ್ಟು ಕಾಲವಾದರೂ ಇಲ್ಲವಾಗಿಸುತ್ತದೆ ಎಂಬ ಭರವಸೆ ಹೊತ್ತ ಹುಡುಗ.

"ನನಗೀಗ ಬೆಳಕಿನದೇ ಧ್ಯಾನ...
ಕಟ್ಟಿಕೊಳ್ಳಬಹುದಾದ ’ಆಕಾಶ ಬುಟ್ಟಿ’ಗೆ
ಆರದ ಬೆಳಕನ್ನು ಹುಡುಕುತ್ತಿದ್ದೇನೆ.

ನಾನೂ ಬೆಳಕಾಗಬೇಕು"

ಎನ್ನುವ ಸಿದ್ಧು, ಬರುವ ನಾಳೆಗಳಿಗೆ... ಉಸಿರು ಹಚ್ಚುವ ಕವಿ.

-ಜಿ. ಎನ್. ಮೋಹನ್

No comments:

Post a Comment