Monday 9 February 2009

ಗ್ರಾಮಸ್ಥರೆಲ್ಲ ಗ್ರಾಮ ತೊರೆಯುವ ಗುಳೇಲಕ್ಕಮ್ಮ ಜಾತ್ರೆ

ನಾಡಿನಲ್ಲಿ ಹಲವಾರು ಜಾತ್ರೆಗಳಿವೆ. ಆದರೆ ಗ್ರಾಮಕ್ಕೆ ಗ್ರಾಮವೇ ಗುಳೇ ಹೋಗುವ, ಗ್ರಾಮವೆಲ್ಲ ಖಾಲಿಯಾಗಿರುವ ಜಾತ್ರೆ ನಡೆಯುವುದು ಅಪರೂಪ ಹಾಗೂ ವಿಶೇಷ.
ಈ ಜಾತ್ರೆಯ ವಿಶೇಷವೆಂದರೆ ಗ್ರಾಮಸ್ಥರೆಲ್ಲ ಒಂದು ದಿನದ ವ್ಮಟ್ಟಿಗೆ ಗ್ರಾಮ ತೊರೆಯುತ್ತಾರೆ. ಅದಕ್ಕೆಂದೇ ಇದಕ್ಕೆ ಗುಳೇ ಲಕ್ಕಮ್ಮ ಜಾತ್ರೆ ಎಂಬ ಹೆಸರು. ಗ್ರಾಮದಿಂದ ಹೊರಹೋಗುವ ಗ್ರಾಮಸ್ಥರು ಹೊರವಲಯದ ಹೊಲ, ತೋಟ, ಶಾಲೆಗಳ ಕೊಠಡಿ, ಗಿಡ-ಮರಗಳ ಕೆಳಗೆ ವಾಸ್ತವ್ಯ ಹೂಡುತ್ತಾರೆ.
ಗುಳೇಲಕ್ಕಮ್ಮ ಜಾತ್ರೆಯನ್ನು ಎಂದು ಆಚರಿಸಲಾಗುವುದು ಎಂದು ಗ್ರಾಮದಲ್ಲಿ ಮೊದಲೇ ಸಾರಲಾಗುವುದು. ಅಂದು ಬೆಳಿಗ್ಗೆ ದೈನಂದಿನ ಕಾರ್ಯಗಳು ಮುಗಿದನಂತರ. ಗ್ರಾಮಸ್ಥರು ತಮ್ಮ ಕುಟುಂಬ ಸಮೇತರಾಗಿ (ತಮ್ಮ ಸಾಕುಪ್ರಾಣಿಗಳನ್ನೂ ಸಹ ಕರೆದುಕೊಂಡು) ಗ್ರಾಮದ ಹೊರವಲಯದಲ್ಲಿ ಬೀಡುಬಿಡುತ್ತಾರೆ. ಗ್ರಾಮದ ಎಲ್ಲರೂ ಮನೆ ತೊರೆದಿದ್ದಾರೆಂದು ಖಚಿತವಾದ ನಂತರ ಗ್ರಾಮದೇವತೆಯನ್ನು ಗ್ರಾಮದ ದೈವಸ್ಥರು ಪೂಜಿಸಿ, ಕೊನೆಯಲ್ಲಿ ಗ್ರಾಮದಿಂದ ಹೊರತರುತ್ತಾರೆ. ಆಗ ಇಡೀ ಗ್ರಾಮ ಖಾಲಿಯಾಗಿರುತ್ತದೆ. ಗ್ರಾಮದ ಹೊರವಲಯದಲ್ಲಿ ಯಾರೂ ಒಳಪ್ರವೇಶಿಸದಂತೆ ಮುಳ್ಳುಬೇಲಿಯನ್ನು ಹಾಕಲಾಗುತ್ತದೆ. ಅಲ್ಲಿಗೆ ಜಾತ್ರೆಯ ಒಂದು ಹಂತ ಮುಗಿದಂತೆ. ಗ್ರಾಮಸ್ಥರು ತಾವು ಬೀಡುಬಿಟ್ಟಲ್ಲೇ ಒಲೆಹೂಡಿ ಸಿಹಿ ಅಡುಗೆ ಮಾಡುತ್ತಾರೆ. ಚೆನ್ನಾಗಿ ಊಟ ಮಾಡಿ ಹರಟೆ ಹೊಡೆಯುತ್ತಾರೆ. ಯಾರಾದರೂ ಅಪರಿಚಿತರು ಗ್ರಾಮಕ್ಕೆ ಬಂದಲ್ಲಿ ಅವರನ್ನು ಒಳಬಿಡದೆ, ಅವರಿಗೆ ಜಾತ್ರೆಯ ಬಗ್ಗೆ ತಿಳಿಹೇಳಿ ತಮ್ಮಲ್ಲಿಯೇ ಕರೆದೊಯ್ದು ಉಪಚರಿಸುತ್ತಾರೆ. ಸಂಜೆಯವರೆಗೂ ಈ ಪ್ರಕ್ರಿಯೆ ನಡೆಯುತ್ತದೆ. ಸಂಜೆಯಾದೊಡನೆ ಮೊದಲಿಗೆ ಗ್ರಾಮದೇವತೆಯನ್ನು ಪೂಜಿಸಿ, ದೇವತೆಯನ್ನು ಮೊದಲು ಗ್ರಾಮದೊಳಗೆ ಕರೆದೊಯ್ಯುತ್ತಾರೆ. ಹಿಂದಿನಿಂದ ಗ್ರಾಮಸ್ಥರು ತಮ್ಮ ಸಾಕುಪ್ರಾಣಿಗೆಳೊಂದಿಗೆ ಮನೆಗಳಿಗೆ ತೆರಳುತ್ತಾರೆ. ಇದೇ ಗುಳೇಲಕ್ಕಮ್ಮನ ಜಾತ್ರೆ.
ಈ ಜಾತ್ರೆ ನಡೆಸಲು ಮುಖ್ಯಕಾರಣವೆಂದರೆ ಜಾನುವಾರುಗಳಿಗೆ, ಜನರಿಗೆ ಕಾಯಿಲೆಗಳು ಬರಬಾರದೆಂದು, ಗ್ರಾಮದೇವತೆಯ ರಕ್ಷಣೆ ತಮಗಿರಲೆಂದು ಹಿಂದಿನಿಂದಲೂ ಈ ಆಚರಣೆ ಬೆಳೆದುಬಂದಿದೆ ಎಂಬುದು ಗ್ರಾಮದ ಹಿರಿಯರ ಹೇಳಿಕೆಯಾಗಿದೆ. ಪ್ರತಿವರ್ಷವೂ ನಡೆಯುವ ಈ ಜಾತ್ರೆ ನಾಡಿನ ಜಾತ್ರೆಗಳಲ್ಲಿಯೇ ವಿಶೇಷವಾಗಿದೆ. ಅಂದಹಾಗೆ ಈ ಜಾತ್ರೆ ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹಿರೇಹೆಗ್ದಾಳ್‌ನಲ್ಲಿ ನಡೆಯಿತು. ಕೂಡ್ಲಿಗಿ ತಾಲ್ಲೂಕಿನಲ್ಲಿ ಕೂಡ್ಲಿಗಿ ಹಾಗೂ ಹಿರೇಹೆಗ್ಡಾಳ್‌ಗಳಲ್ಲಿ ಮಾತ್ರ ಈ ಜಾತ್ರೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ

No comments:

Post a Comment