Saturday 14 February 2009

ವಾಲಂಟೈನ್ಸ್ ಡೇ ಎಂಬ ರಾಮಾಯಣ

ಮಾಯದ ಜಿಂಕೆಯ ಬೆನ್ನತ್ತಿ ಹೋದ ರಾಮ ಸೀತೆಯನ್ನು ಕಳೆದು ಕೊಂಡು ಬಿಟ್ಟ. ಅತ್ತ ಜಿಂಕೆಯೂ ಇಲ್ಲ, ಇತ್ತ ಸೀತೆಯೂ ಇಲ್ಲ. ಸೀತೆಗೆ ಈ ಮಾಯದ ಜಿಂಕೆ ಕಾಣಿಸಿಕೊಂಡು ಪ್ರಲೋಭ ಒಡ್ಡಿರುವ ಬಗ್ಗೆ ರಾಮನಿಗೆ ಅತ್ಯಂತ ಖೇದವಾಗಿತ್ತು.
ಸೀತೆ ಕೆಲವು ಸುಳಿವುಗಳನ್ನು ಬಿಟ್ಟು ಹೋಗಿದ್ದರಿಂದ ಅವಳು ಲಂಕಾ ಪಟ್ಟಣದಲ್ಲಿ ರಾವಣನ ಸೆರೆಯಲ್ಲಿದ್ದಾಳೆ ಎಂದು ರಾಮ ಗೊತ್ತು ಮಾಡಿಕೊಂಡ.
ಹೊಸದಾಗಿ ಶಿಷ್ಯನಾಗಿದ್ದ ಹನುಮನಿಗೆ ಸೀತೆಯ ಮಾಹಿತಿ ತರಲು ಕಳಿಸಿಕೊಟ್ಟು ಕಾಯುತ್ತಾ ಕುಳಿತ.
ವಾಯುಪುತ್ರ ಹನುಮ ಆಕಾಶ ಮಾರ್ಗದಲ್ಲಿ ಸಂಚರಿಸುವಾಗ ಆತನಿಗೆ ದಾರಿಯೂದ್ದಕ್ಕೂ ಮಿಸ್ ಆದ ಎಸ್.ಎಂ.ಎಸ್.ಗಳು, ವಿವಿಧ ಚಾನೆಲ್‌ಗಳ ಅಂತರಾತ್ಮಗಳು, ದಾರಿ ತಪ್ಪಿಸಿಕೊಂಡ ಈಮೇಲ್‌ಗಳು ಢಿಕ್ಕಿ ಹೊಡೆದು ಮಾಹಿತಿ ತಂತ್ರಜ್ಞಾನದ ಯುಗಕ್ಕೆ ಕರೆದುಕೊಂಡು ಹೋದವು. ತಕ್ಷಣವೇ ನಮ್ಮ ಹನುಮ ಮಿಸ್ಟರ್ ಹನುಮಂತ್ ಆಗಿ ಬಿಟ್ಟ. ಐಟಿ, ಬಿಟಿ ಲೋಕದಲ್ಲಿ ಹರಡಿ ರಾಮ-ಸೀತೆ, ರಾವಣನ ಲೋಕವೆಲ್ಲಾ ಸಿಲಿಕಾನ್ ಸಿಟಿಯಾಗಿ ಬಿಟ್ಟಿತು.
ಅಂತೂ ಕೊನೆಗೆ ಸೀತೆ, ರಾಮ ಇಬ್ಬರು ಸಂಧಿಸುವಲ್ಲಿ ಮಿಸ್ಟರ್ ಹನುಮಂತ ಯಶಸ್ವಿಯಾಗಿ ಬಿಟ್ಟ.
ಅದೊಂದು ದಿನ ಸೀತೆಯೊಂದಿಗೆ ಮಿಸ್ಟರ್ ಹನುಮಂತ್ ಬ್ರಿಗೇಡ್ ರಸ್ತೆಯಲ್ಲಿ ರಾಮನ ದಾರಿ ಕಾಯುತ್ತಾ ನಿಂತರು.
ಈ ನಡುವೆ ರಾಮನಿಗೆ ಎಲ್ಲಾ ವರ್ತಮಾನ ಈ ಮೇಲ್ ಮೂಲಕ ಗೊತ್ತಾಗಿ, ಎಸ್.ಎಂ.ಎಸ್.ದಾರಿ ಕಾಯುತ್ತಾ ರಿಲ್ಯಾಕ್ಸ್ ಆಗಿ ಪಬ್‌ಗೆ ನುಗ್ಗಿ ಒಂಚೂರು ಬಂಗಾರದ ದ್ರವದಿಂದ ನಾಲಿಗೆ ತೇವ ಮಾಡಿಕೊಂಡ. ಪಬ್‌ನಲ್ಲಿ ಹುಡುಗ-ಹುಡುಗಿಯರು ಡ್ಯಾನ್ಸ್ ಮಾಡೋವುದನ್ನು ನೋಡಿ, ತಾನು ಇಂತಹ ಪಬ್ ಒಂದರಲ್ಲಿಯೇ ಸೀತೆಯನ್ನು ಭೇಟಿಯಾಗಿದ್ದು, ಭೇಟಿ ನಂತರ ಪ್ರೀತಿಗೆ ಹೊರಳಿದ್ದು, ಅವಳು ತನ್ನ ಕಷ್ಟವನ್ನು, ಇವನು ತನ್ನ ಕಷ್ಟವನ್ನು ಹಂಚಿಕೊಂಡಿದ್ದು, ಇಬ್ಬರೂ ಬಾಳು ಹಂಚಿಕೊಳ್ಳಲು ನಿರ್ಧರಿಸಿ ಮದುವೆಯಾಗಿದ್ದು. ಎಲ್ಲವೂ ಕನ್ನಡ ಸಿರಿಯಲ್‌ಗಳಂತೆ ನೆನಪಾದವು. ಅದೊಂದು ರಾಮಾಯಣವೇ? ಈ ಬಗ್ಗೆ ಜೋಗಿ, ವಸುಧೇಂದ್ರ, ಚೇತನಾ ಮುಂತಾದವರಿಗೆ ಕಥೆ ಬರೆಯಲು ಬಿಟ್ಟು ಬಿಡೋಣ. ನಮಗೇಕೆ ಈ ಉಸಾಬರಿ. ನಮ್ಮ ಕಥಾ ನಾಯಕ ರಾಮ ಪಬ್‌ನಲ್ಲಿ ಮೂರು ಪೆಗ್ ಹಾಕಿದಾಗ ಅಮೇರಿಕಾ ಎಂಬುದೆ ಈ ಮಾಯಾ ಜಿಂಕೆ ಎಂಬ ರೂಪಕದ ಭಾಷೆಯಲ್ಲಿ ಏನೋನು ಬುದ್ಧಿಜೀವಿ ಕವಿಯಂತೆ ತನಗೆ ತಾನೇ ಮಾತನಾಡಿಕೊಂಡ. ಅಷ್ಟರಲ್ಲಿ ಬೀಪ್ ಶಬ್ದ ನಾನು ಇನ್ನೂ ಜೀವಂತ ಇದ್ದೀನಿ ಎಂದು ಮೊಬೈಲ್ ನೆನಪು ಮಾಡಿತು.
ತಡಮಾಡದೇ ನಮ್ಮ ರಾಮ ಬ್ರಿಗೇಡ್ ರಸ್ತೆಗೆ ಬೈಕ್ ಓಡಿಸಿದ. ಸೀತೆ ಗುಲಾಬಿ ಹೂವು ಕೈಯಲ್ಲಿ ಹಿಡಿದು ’ಐ ಲವ್ ಯುವ್’ ಎನ್ನುವಂತೆ ನಿಂತಿದ್ದಳು. ರಾಮ ಹೂವು ತೆಗೆದುಕೊಂಡಾಗ ಇಬ್ಬರ ಕಣ್ಣುಗಳಲ್ಲಿ ಕಂಬನಿಯೂ, ಆನಂದಭಾಷ್ಪವೋ ಅಂತೂ ಇಬ್ಬರೂ ಒಬ್ಬರನ್ನೊಬ್ಬರು ಸಿನಿಮಾ ನಾಯಕ=ನಾಯಕಿಯಂತೆ ಬಿಗಿದಪ್ಪಿಕೊಳ್ಳಬೇಕು ಎಂದು ಕೊಂಡಿರುವಾಗ, ಇಂತಹ ಸನ್ನಿವೇಶವನ್ನೇ ಕಾಯುತ್ತ ಪುಳುಕಿತನಾಗಲು ಮಿಸ್ಟರ್ ಹನುಮಂತ್ ಸಿದ್ಧನಾಗಿರುವಾಗ ವಾನರ ಸೇನೆಯೊಂದು ಧಾಳಿ ನಡೆಸಿ ಬಿಟ್ಟಿತು.
’ಭಾರತೀಯ ಸಂಸ್ಕೃತಿ ಉಳಿಸಿ’ ’ವಾಲಂಟೈನ್ಸ್ ಡೇಗೆ ಧಿಕ್ಕಾರ’ ಘೋಷಣೆಗಳು. ಒಂದು ಕೈಯಲ್ಲಿ ರಾಖಿ ಮತ್ತೊಂದು ಕೈಯಲ್ಲಿ ಕರೀಮಣಿ ಸರ ಹಿಡಿದುಕೊಂಡಿದ್ದ ಗಡುವನೊಬ್ಬ ರಾಮನಿಗೆ ಒಂದೇಟು ಕೊಟ್ಟವನೇ ಯಾವದು ಬೇಕು ಎಂಬಂತೆ ಎರಡನ್ನೂ ಮುಖದ ಮುಂದೆ ಆಡಿಸಿದ. ಈ ನಡುವೆ ಸೀತೆಯನ್ನು ಎಳೆದಾಡುತ್ತಾ ಹಲ್ಲೆ ನಡೆಸಿ ಭಾರತೀಯ ಸಂಸ್ಕೃತಿ ಉಪದೇಶ ನೀಡಿದ ವಾನರರು ಅಡ್ಡ ಬಂದ ಮಿಸ್ಟರ್ ಹನುಮಂತ್‌ನಿಗೆ ಬ್ರೋಕರ್ ನನ್ನ ಮಗನೇ ಎಂದೇ ಒಬ್ಬರಮೇಲೊಬ್ಬರು ಲಾಥು ಹಾಕಿ, ನೆಲಕ್ಕೆ ಕೆಡವಿದ್ದರು. ರಾಮ ಸೀತೆಗೆ ತಾಳಿ ಕಟ್ಟಿದನೇ? ಅಥವಾ ರಾಖಿ ಕಟ್ಟಿದನೋ? ನಮ್ಮ ಪೊಲಂಕಿ ಬದುಕಿದ್ದರೆ ಇನ್ನೊಂದು ಪೊಲಂಕಿಯಾಣ ಬರೆದು ಬಿಡುತ್ತಿದ್ದರು. ಹೀಗೆ ’ವಾಲಂಟೈನ್ಸ್ ಡೇ ರಾಮಾಯಣ’ ಎಂಬ ದಕ್ಷಿಣ ಕಾಂಡ ಆರಂಭವಾಯಿತು.
- ಪರಶುರಾಮ ಕಲಾಲ್
February 14, 2009 12:13 AM

1 comment:

  1. ಒಟ್ಟಲ್ಲಿ ಸರ್ವಂ ರಮಾಯಣಮಯಂ!

    ReplyDelete