Wednesday, 11 February 2009

ಮಾತಂಗ ಬೆಟ್ಟದ ನಡುವಲ್ಲಿ ನಿಂತು




ಇಲ್ಲಿ
ನಿಂತು ನೋಡಿದರೆ ಎಂದೂ ನೋಡದಂತೆ
ಹಂಪೆ - ರಥಬೀದಿ ಇಕ್ಕೆಲಗಳಲ್ಲಿ ಹಾಳು
ಮಂಟಪಗಳ ನಡುವೆ ಗೋಡೆ ಎದ್ದ ಮನೆ,
ಎದುರಿನಲಿ ವಿರೂಪಾಕ್ಷ ರಾಜ
ಗೋಪುರದ ಹೊಂಬೆಳಕು, ಕಳಶ ಕಾಯುವ ಕಾಯಕದಿ
ಕಾಲು ಸೋತು ಮುದುರಿದ ಬಸವ ಎದುರು.

ಬದಿಯಲ್ಲಿ ಬಡವಿ ಲಿಂಗ ಮುಳುಗಿ
ಪಕ್ಕದ ಉಗ್ರ -
ನಾರಸಿಂಹನ ಮೊಗದಲ್ಲಿ ನಗೆಯೇ ?
ಸಾಸಿವೆ ಕಡಲೆ ಗಣಪಗಳ ನೋಡುತ್ತಾ ನಿಂತ
ಉದ್ಧಾನ ವೀರಭದ್ರನ ಮುಂದೇ
ತಳಭದ್ರವಿಲ್ಲದವರ ರಸಬಜಾರಿನ ಖಾಲಿ
ಮಂಟಪ ಹರಡಿ - ಕೋಟೆ ಬಾಗಿಲ ತಿರುವು
ಹಿರಿ ಬಂಡೆಗಳ ಮುರುವುಗಳ ಮಧ್ಯೆ
ಗುಡಿಯಲ್ಲಿ ಕೃಷ್ಣನಿಲ್ಲ, ಅಚ್ಯುತನೂ. . .

ಮೋಡ ಮುಸುಕುದ ಮುಂಜಾನೆ ಬಂಡೆ
ಹತ್ತಲಾಗದೇ ಬೆಟ್ಟದ ನಡುವಲ್ಲಿ ನಿಂತ ಉಬ್ಬುಸ -
ಗೆಳೆಯ, ಹತ್ತಿ ನೆತ್ತಿ ಮೇಲೆ ಕರೆವ
ಗೆಳತಿಯರ ಆ ಹೊತ್ತು
ಪಟಪಟಿಸುವ ರೆಕ್ಕೆ ಬಿಚ್ಚಿ ನಿಸೂರಾಗಿ
ಹಾರಿ ಯಂತ್ರೋದ್ಧಾರಕನ ತಾಗಿ, ಪುರಂದರನ ಕೂಗಿ,
ವಿಜಯ ವಿಠ್ಠಲನ ಮುಂದೆ ಕೋದಂಡ ರಾಮ. . .
ರಾಮ ರಾಮ ಅದೇ ರಾಮ ಹಜಾರ -
ರಾಮ !

ಇದೇನೇ ಹಂಪೆ ?
ಮಾತಂಗದ ಮಧ್ಯದಿಂದ ಕಂಡುದು :
ಅಲ್ಲಿ ಆನೆಯ ಲಯವಿಲ್ಲದ, ಖರಪುಟದ ಸದ್ದಿಲ್ಲದ
ದಾರಿಯಲ್ಲಿ ಧೂಳೆದ್ದು ಮೇಲೆ ಬಿಸಿಲು - ಮುಸುಕು.

ಮುಸುಕು ಸರಿಸಿದರೆ ;
ಇಲ್ಲಿ ಅನಂಗನೆಯರು ಅನಂಗನಾಟದಲ್ಲಿ ಮಿಂಚಿ
ಸ್ನಾನ ಗೃಹದಲಿ ಮಿಂದು ಗೆಜ್ಜೆ ಇನಿದನಿ
ಕೈಬಳೆ ಸದ್ದಿಗೆ ಪುಷ್ಕರಿಣಿಯ ಪುಲಕ.
ಸರಿವ ಮೋಡದ ನೆರಳು ನಿಂತು ನಿಂತು
ನಡೆದಂತೆ ನಜರೆ ಸಲಾಮೆನ್ನುವ ಸೈನಿಕರ ರಾವು
ಮಾನವಮಿ ದಿಬ್ಬದ ಠಾವು.

ಬೆಟ್ಟದ ನಡುವಲ್ಲಿ ನಾ ಕಂಡ ಹಂಪೆ :
ಹರೆಯದವಳಲ್ಲ.
ಎಂದೋ ಬೈತಲೆ ಕೆದರಿ
ಹಣೆ ಬೆವರು ಕುಂಕುಮ ಕದಡಿ
ಮೂಗುತಿಯಲಿ ಬೆವರು ಕರೆಗಟ್ಟಿ
ಮರೆಸಿ ಮಿಂಚು, ಹರಿದ ರವಿಕೆ, ನೆರಿಗೆ ಮರೆತ
ಸೀರೆಯಲಿ ಮುದುಡಿದಂತೆ ಮಾತೆ,
ಮಾತಂಗ ಜಾತೆ.

ಅವಳ ಉಸಿರಿನ ಬಿಸಿಬಿಸಿ ಅಲೆ
ಬಂಡೆಗಪ್ಪಳಿಸಿ, ಬೆಳಕ ತೋಯಿಸಿದ ಆರ್ದ್ರತೆ.
ಕಂಗಳಲ್ಲಿ ಮೋಡ ಮುಸುಕುದ ಹಗಲು
ಧೀಂಗುಡುವ ದುಗುಡ.

ಅವಳು ಅಳುವುದಿಲ್ಲ - ಕರೆಯುತ್ತಾಳೆ
ಎಂದೂ ಮಲಗುವುದಿಲ್ಲ - ಜಾಗರಿಸುತ್ತಾಳೆ

ಮಾತಂಗ ಬೆಟ್ಟದ ನಡುವೆ ನಿಂತು
ನೋಡಿದರೆ - ಬೆಳಗಿನ ಹಂಪೆ ;
ಆಗಷ್ಟೇ ಮಿಂದು ಶ್ರೀಮುಡಿ ಕಟ್ಟಿದ ತಾಯಿ
ಹಣೆಯ ಬೊಟ್ಟಿಗೆ, ಬಿಸಿಲ ರಾವುತನೊಟ್ಟಿಗೆ
ಬಾಳಿ, ಗಾಳಿಗೊರಗಿದ ದೀರ್ಘ ಮುತ್ತೈದೆ.

- ಆನಂದ್ ಋಗ್ವೇದಿ

2 comments:

  1. ನಿಮ್ಮ ಪದೊವೈಭವದ ಹಂಪಿಯನು
    ಕಣ್ಣಲ್ಲಿಯೂ ಸಹ ಕಟ್ಟಿಕೊಳ್ಳಲು ಸಾಧ್ಯವಿಲ್ಲ
    ಧನ್ಯವಾದಗಳು

    ReplyDelete